ಎಲ್ಗಿನ್, ಲಾರ್ಡ್ 2

1849-1917. ಎಲ್ಗಿನ್ ಮತ್ತು ಕಿಂಕಾರ್ಡೀನ್‍ಗಳ ಎಂಟನೆಯ ಅರ್ಲನ ಮಗ, ಒಂಬತ್ತನೆಯ ಅರ್ಲ್. ಹೆಸರು ವಿಕ್ಟರ್ ಅಲೆಗ್ಸಾಂಡರ್. 1894ರಿಂದ 1899ರವರೆಗೆ ಭಾರತದ ವೈಸರಾಯ್ ಆಗಿದ್ದ. ಈತನ ತಂದೆಯೂ ಭಾರತದ ವೈಸರಾಯ್ ಆಗಿದ್ದದ್ದರಿಂದ ಈತ ಎರಡೆನೆಯ ಲಾರ್ಡ್ ಎಲ್ಗಿನ್ ಎನಿಸಿಕೊಂಡಿದ್ದಾನೆ. ಈತನೂ ಈಟನ್ ಆಕ್ಸ್‍ಫರ್ಡ್‍ಗಳಲ್ಲಿ ವಿದ್ಯೆ ಗಳಿಸಿದ. ತಂದೆಯಂತೆ ದಕ್ಷನೇನೂ ಅಲ್ಲ. ಈತನ ಅಧಿಕಾರದ ಕಾಲದಲ್ಲಿ ಎರಡು ಮಹಾ ದುರ್ಘಟನೆಗಳು ಒದಗಿದುವು: ಒಂದು, ಬೊಂಬಾಯಿಯಲ್ಲಿ 1896ರಲ್ಲಿ ತಲೆದೋರಿದ ಪ್ಲೇಗು ಜಾಡ್ಯ; ಇನ್ನೊಂದು, ಇಡೀ ಭಾರತದಲ್ಲಿ ಸಂಭವಿಸಿದ ಭೀಕರ ಕ್ಷಾಮ (1896-97). ಎಲ್ಗಿನನ ಸರ್ಕಾರ ಇವೆರಡರ ವಿರುದ್ದ ಯಾವ ಪರಿಣಾಮಕಾರಿ ಕ್ರಮವನ್ನೂ ಕೈಕೊಳ್ಳಲಿಲ್ಲ. ಬ್ರಿಟಿಷ್ ಭಾರತದಲ್ಲೇ ಸುಮಾರು ಹತ್ತು ಲಕ್ಷ ಮಂದಿ ಸತ್ತರು. ಪ್ಲೇಗ್ ಜಾಡ್ಯವನ್ನೆದುರಿಸುವ ನೆವದಲ್ಲಿ ಸರ್ಕಾರ ಕೈಕೊಂಡ ಉಗ್ರಕ್ರಮಗಳೂ ಜನರಿಗೆ ಹಿಡಿಸಲಿಲ್ಲ. ಭಾರತೀಯರ ಮರ್ಯಾದೆಗೆ ಭಂಗ ತರುವ ವರ್ತನೆಯಿಂದ ಮುಳಿದ ಪುಣೆಯ ಜನ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಈ ಘಟನೆ ರಾಜಕೀಯ ಬಣ್ಣ ತಳೆಯಿತು.
 	
ಎಲ್ಗಿನನ ವೈಸ್‍ರಾಯಿಗಿರಿಯಲ್ಲಿ ಇನ್ನೂ ಅನೇಕ ಅನಾಹುತಗಳು ಸಂಭವಿಸದುವು. ಬ್ರಿಟಿಷ್ ಸರ್ಕಾರದ ಹಣಕಾಸಿನ ನೀತಿ ಭಾರತೀಯರ ಹಿತಕ್ಕೆ ವಿರೋಧವಾಗಿತ್ತೆಂಬುದು ಬಯಲಿಗೆ ಬಂದದ್ದು ಆಗ. 1895ರ ಆಯ-ವ್ಯಯದ ಕೊರತೆ ತುಂಬುವ ನೆವದಿಂದ ಸರ್ಕಾರ ಆಗ ಭಾರತದ ಆಮದು ವಸ್ತುಗಳ ಮೇಲೆ ಶೇಕಡಾ 5ರ ಸುಂಕ ವಿಧಿಸಿತು. ಆದರೆ ಲ್ಯಾಂಕಷೈರಿನಿಂದ ಭಾರತಕ್ಕೆ ಬರುತ್ತಿದ್ದ ಹತ್ತಿಯ ಬಟ್ಟೆಗೆ ಮಾತ್ರ ಈ ಸುಂಕದಿಂದ ವಿನಾಯಿತಿಯಿತ್ತು. ಬ್ರಿಟಿಷ್ ತಯಾರಿಕೆದಾರರ ಬಗ್ಗೆ ತೋರಿದ ಈ ಪಕ್ಷಪಾತದಿಂದ ಭಾರತದಲ್ಲಿ ಉಂಟಾದ ಅಸಮಾಧಾನವನ್ನು ನಿವಾರಿಸಲೋ ಎಂಬಂತೆ ಆ ಪದಾರ್ಥಗಳ ಮೇಲೂ ಸುಂಕ ಜಾರಿಗೆ ತರಲಾಯಿತಾದರೂ ಭಾರತೀಯ ಜವಳಿಯ ಮೇಲೆ ಇದೇ ಪ್ರಮಾಣದ ಪ್ರತಿಸುಂಕ ವಿಧಿಸಿದಾಗ ಬ್ರಿಟಿಷ್ ಸರ್ಕಾರದ ಕುಟಿಲನೀತಿ ಸ್ಪಷ್ಟವಾಯಿತೆನ್ನಬಹುದು. ಭಾರತದ ಹತ್ತಿಜವಳಿ ಕೈಗಾರಿಕೆಯನ್ನು ಬೆಳೆಯಗೊಡಬಾರದೆಂಬುದೇ ಇದರ ಹಿಂದಿದ್ದ ಉದ್ದೇಶ.
 	
ವಾಯವ್ಯ ಗಡಿನಾಡಿನಲ್ಲಿ ಲಾರ್ಡ್ ಎಲ್ಗಿನನ ಸರ್ಕಾರ ಅನಾವಶ್ಯಕವಾಗಿ ಗೊಂದಲವನ್ನುಂಟುಮಾಡಿತು. ಚಿತ್ರಾಲಿನ ಸಿಂಹಾಸನಕ್ಕೆ ಯಾರು ಬರಬೇಕೆಂಬ ಬಗ್ಗೆ ಸರ್ಕಾರ ಬಾಯಿಹಾಕಿದ್ದರಿಂದ ಅಲ್ಲಿ ಉದ್ಭವಿಸಿದ ಅಸಾಮಾಧಾನವನ್ನಡಗಿಸಲು ಭಾರತದ ಬ್ರಿಟಿಷ್ ಸೇನೆ ಅಲ್ಲಿಗೆ ನುಗ್ಗಿತು. ಇದರಿಂದ ನೆರೆಯ ಜನರೂ ದಂಗೆಯೆದ್ದರು. ಎರಡು ಯುದ್ಧಗಳು ನಡೆದುವು. 1898ರಲ್ಲಿ ಬ್ರಿಟಿಷ್ ಸರ್ಕಾರ ಕೊನೆಗೆ ಜಯಗಳಿಸಿತಾದರೂ 1857ರ ಅನಂತರ ಸರ್ಕಾರ ಎದುರಿಸಿದ ದೊಡ್ಡಗಂಡಾಂತರಗಳಲ್ಲಿ ಇದೂ ಒಂದು.
 	
ಲಾರ್ಡ್ ಎಲ್ಗಿನ್ ಆಡಂಬರಪ್ರಿಯನಾಗಿರಲಿಲ್ಲ. ಆದರೆ ಈತನ ಆಡಳಿತ ಜಯಪ್ರದವಾಗಲಿಲ್ಲ. ಭಾರತದ ರಾಜಕೀಯ ಸುಧಾರಣೆಗಳ ಬಗ್ಗೆ ಲಾರ್ಡ್ ಮಾರ್ಲೆ ನೀಡಿದ ಸಲಹೆಗಳನ್ನು ವಿರೋಧಿಸಿದವರ ಪೈಕಿ ಇವನೂ ಒಬ್ಬ. 			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ